ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಿ ತೋರಿಸಿ’ : ಕಾಂಗ್ರೆಸ್‌ಗೆ ಬಿ.ಎಸ್.ವೈ ಚಾಲೆಂಜ್..!

ಬೆಂಗಳೂರು:ಕೇಂದ್ರದಲ್ಲಿ ನಾವು ದಲಿತರನ್ನು ಸಚಿವರನ್ನಾಗಿ ಮಾಡಿಯೇ ಮಾಡುತ್ತೇವೆ ತಾಕತ್ತಿದ್ದರೆ ನೀವು ರಾಜ್ಯದಲ್ಲಿ ಅದೇ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತೋರಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.ಕೇಂದ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ವೇಳೆ ನಾನು ಮತ್ತು ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೇಂದ್ರದಲ್ಲಿ ದಲಿತ ಸಮುದಾಯದವರೊಬ್ಬರನ್ನು ಸಚಿವರನ್ನಾಗಿ ಮಾಡುವಂತೆ ಕೇಳಿಕೊಂಡಿದ್ದೆವು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸಚಿವರು ಮತ್ತು ನೂತನ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಕೇಂದ್ರದಲ್ಲಿ ದಲಿತರನ್ನು ಮಂತ್ರಿ ಮಾಡುತ್ತೇವೆ. ನೀವು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಸಿದ್ದರಾಮಯ್ಯ ಅವರನ್ನ ಪರೋಕ್ಷವಾಗಿ ಪ್ರಶ್ನಿಸಿದರು.ಮಹಾನ್ ನಾಯಕರೊಬ್ಬರು ಬಿಜೆಪಿಯವರು ದಲಿತ ವಿರೋಧಿಗಳೆಂದು ಆರೋಪ ಮಾಡುತ್ತಿದ್ದರು. ರಾಜ್ಯದ ಐದು ಪರಿಶಿಷ್ಟ ಜಾತಿ, ಎರಡು ಪರಿಶಿಷ್ಟ ವರ್ಗ ಕ್ಷೇತ್ರಗಳಲ್ಲಿ ನಾವೇ ಗೆದ್ದಿದ್ದೇವೆ. ಇಂತಹವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕೆ ಎಂದು ಪ್ರಶ್ನೆ ಮಾಡಿದರು.ಯಾವುದೇ ಕಾರಣಕ್ಕೂ ಬಳ್ಳಾರಿಯಲ್ಲಿ ಜಿಂದಾಲ್ ಕಂಪೆನಿಗೆ 3667 ಎಕರೆ ಜಮೀನು ಕೊಡಲು ಅವಕಾಶ ನೀಡುವುದಿಲ್ಲ. ಪಕ್ಷದ ವತಿಯಿಂದ ಯಾವುದೇ ಹೋರಾಟಕ್ಕೂ ಸಿದ್ದ ಎಂದು ಘೋಷಿಸಿದರು.ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ್‍ಅಂಗಡಿ, ಪ್ರಹ್ಲಾದ್ ಜೋಷಿ ಮತ್ತಿತರರು ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಅವಕಾಶ ಕೊಡಬಾರದು. ಸಾಧ್ಯವಾದರೆ ಪ್ರಧಾನಿಯವರ ಗಮನಕ್ಕೂ ತರಬೇಕೆಂದು ಸಲಹೆ ಮಾಡಿದರು.ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಬಗ್ಗೆ ನಮ್ಮದೇನೂ ತಕರಾರಿಲ್ಲ. ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದಾಗ ಆ ಗ್ರಾಮಗಳಿಗೆ ಒಂದೊಂದು ಕೋಟಿ ವಿಶೇಷ ಅನುದಾನ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಈಗ ಗ್ರಾಮಗಳ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಗೊತ್ತೆ ಎಂದು ಪ್ರಶ್ನಿಸಿದರು.

Share Post

Leave a Reply

error: Content is protected !!