ವಿಶ್ವಕಪ್‌ನಲ್ಲಿ ನಾಳೆ ಹರಿಣಗಳ ವಿರುದ್ಧ ಭಾರತ ಫಸ್ಟ್ ಫೈಟ್..!

ಸೌತ್‍ಆಪ್ಟನ್: ಕ್ರಿಕೆಟ್ ಜನಕರ ನಾಡಿನಲ್ಲಿ ನಡೆಯುತ್ತಿರುವ 12ನೆ ವಿಶ್ವಕಪ್‍ನಲ್ಲಿ ನಾಳೆ 1983, 2011ರ ಚಾಂಪಿಯನ್ಸ್ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಸವಾಲನ್ನು ಎದುರಿಸುತ್ತಿದೆ. ವಿಶ್ವಕಪ್ ನಾಯಕತ್ವ ವಹಿಸಿಕೊಂಡಿರುವ ಪ್ರಥಮ ಪಂದ್ಯವನ್ನು ಗೆಲ್ಲಲೇಬೇಕೆಂಬ ಎಂಬ ಹುಮ್ಮಸ್ಸಿನಲ್ಲಿ ವಿರಾಟ್ ಕೊಹ್ಲಿ ಇದ್ದರೆ, ಮತ್ತೊಂದೆಡೆ ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‍ಗೆ ಶರಣಾಗಿ, ನಂತರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಹೀನಾಯ ಸೋಲು ಕಂಡಿರುವ ಡುಪ್ಲೆಸಿಸ್ ಸಾರಥ್ಯದ ದಕ್ಷಿಣ ಆಫ್ರಿಕಾಕ್ಕೆ ನಾಳೆಯ ಪಂದ್ಯ ಪ್ರಮುಖವಾಗಿದೆ.

ಹರಿಣಿಗಳಿಗೆ ಬೂಮ್ರಾ ಭಯ..? : ಇಂಗ್ಲೆಂಡ್‍ನ ಪಿಚ್‍ಗಳು ವೇಗಿಗಳಿಗೆ ಸಹಕಾರಿ ಎಂಬುದನ್ನು ಇದುವರೆಗೂ ಆಡಿರುವ ಕೆಲವು ಪಂದ್ಯಗಳ ಋಜುವಾತು ಪಡಿಸಿದ್ದು, ವೇಗದ ಬೌಲಿಂಗ್ ಎದುರೇ ಎಡವಿರುವ ಹರಿಣಗಳಿಗೆ ನಾಳೆಯ ಪಂದ್ಯದಲ್ಲೂ ವಿಶ್ವದ ನಂಬರ್ 1 ಬೌಲರ್ ಜಸ್‍ಪ್ರೀತ್ ಬೂಮ್ರಾರ ಭಯ ಕಾಡುತ್ತಿದೆ.

ಬೂಮ್ರಾ ಜೊತೆಗೆ ಮಾರಕ ಬೌಲಿಂಗ್ ಮಾಡುವ ಚಾಕಚಕ್ಯತೆ ಹೊಂದಿರುವ ಭುವನೇಶ್ವರ್‍ಕುಮಾರ್, ಮೊಹಮ್ಮದ್ ಶಮಿ, ಅರೆಕಾಲಿಕ ಬೌಲರ್ ಹಾರ್ದಿಕ್ ಪಾಂಡ್ಯಾರ ವೇಗದ ಮೊನಚನ್ನು ಎದುರಿಸಿ ಡುಪ್ಲಿಸಿಸ್‍ನ ಬ್ಯಾಟ್ಸ್‍ಮನ್‍ಗಳು ರನ್ ಕದಿಯಬೇಕಾಗಿದೆ. ಸ್ಪಿನ್ ವಿಭಾಗದಲ್ಲಿ ರವೀಂದ್ರಾಜಾಡೇಜಾ, ಕುಲ್‍ದೀಪ್ ಯಾದವ್, ಯಜುವೇಂದ್ರ ಚಹಾಲ್ ಕೂಡ ಹೆಚ್ಚು ರನ್‍ಗಳನ್ನು ನೀಡದೆ ವಿಕೆಟ್ ಕಬಳಿಸುವ ಕೌಶಲ್ಯ ಹೊಂದಿದ್ದಾರೆ.

ಗಾಯಾಳುಗಳ ಸಮಸ್ಯೆ:  ದಕ್ಷಿಣಆಫ್ರಿಕಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ತಂಡದ ಪ್ರಮುಖ ವೇಗಿ ಡೇನ್‍ಸ್ಟೇನ್ ಸರಣಿಗೂ ಮುನ್ನವೇ ಭುಜದ ನೋವಿನಿಂದ ಬಳಲಿದ್ದು ಇಂಗ್ಲೆಂಡ್ ಹಾಗೂ ಬಾಂಗ್ಲಾ ವಿರುದ್ಧದ ಪಂದ್ಯದಿಂದ ದೂರ ಉಳಿದಿದ್ದರು. ಇಂಗ್ಲೆಂಡ್ ವಿರುದ್ಧ ಗಾಯಗೊಂಡಿದ್ದ ಸ್ಫೋಟಕ ಬ್ಯಾಟ್ಸ್‍ಮನ್ ಹಶೀಮ್ ಆಮ್ಲಾ ಬಾಂಗ್ಲಾ ಪಂದ್ಯದಿಂದ ದೂರಗುಳಿದಿದ್ದರೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಾಗೊಂಡಿರುವ ಪ್ರಮುಖ ವೇಗಿ ಕಗಸೊ ರಾಬಾಡ ಭಾರತ ತಂಡದ ವಿರುದ್ಧದ ಪಂದ್ಯದಿಂದ ದೂರ ಉಳಿಯುವುದರಿಂದ ಹರಿಣಗಳಿಗೆ ಬೌಲಿಂಗ್ ಚಿಂತೆ ಕಾಡುತ್ತಿದೆ.

ಭಾರತಕ್ಕೆ ತ್ರಿಮೂರ್ತಿಗಳ ಬಲ:  ವಿಶ್ವದ ನಂಬರ್ 1 ಬ್ಯಾಟ್ಸ್‍ಮನ್ (ವಿರಾಟ್ ಕೊಹ್ಲಿ)ಯನ್ನು ಹೊಂದಿರುವ ಟೀಂ ಇಂಡಿಯಾಕ್ಕೆ ರೋಹಿತ್‍ಶರ್ಮಾ, ಶಿಖರ್‍ಧವನ್, ವಿರಾಟ್ ಕೊಹ್ಲಿ ತ್ರಿಮೂರ್ತಿಗಳ ಬ್ಯಾಟಿಂಗ್ ಬಲವಿದ್ದು ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಎದುರು ಉತ್ತಮ ಇನ್ನಿಂಗ್ ಕಟ್ಟಿದರೆ, ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ಅಲೌಂಡರ್‍ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರಾಜಾಡೇಜಾ ಡಗ್ ಓವರ್ಸ್‍ಗಳಲ್ಲಿ ಭಾರೀ ಮೊತ್ತವನ್ನು ಪೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿ ಡುಪ್ಲಿಸಿಸ್ ಪಡೆಗೆ ಚಾಲೆಂಜಿಂಗ್ ಮೊತ್ತವನ್ನು ನೀಡಬಲ್ಲರು.

ಸಿಡಿಯದ ಬ್ಯಾಟ್ಸ್‍ಮನ್‍ಗಳು:  ಬೌಲಿಂಗ್‍ನಲ್ಲದೆ ಬ್ಯಾಟಿಂಗ್‍ನಲ್ಲೂ ಎಡವುತ್ತಿರುವ ದಕ್ಷಿಣ ಆಫ್ರಿಕಾ ಬಳಗದಲ್ಲಿ ಆರಂಭಿಕ ಆಟಗಾರ ಡಿ ಕಾಕ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಹಿ ವಾನ್ ದುಸ್ಸೆನ್ ಸ್ಥಿರ ಪ್ರದರ್ಶನ ನೀಡುತ್ತಿದ್ದರೆ, ನಾಯಕ ಡುಪ್ಲಿಸಸ್, ಮಕ್ರಮ್, ಜೆ.ಪಿ.ಡುಮಿನಿ, ಡೇವಿಡ್‍ಮಿಲ್ಲರ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಲಿಲ್ಲವಾದರೂ ಬಾಂಗ್ಲಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದರೂ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ಯಲು ಎಡವಿದ್ದರು.

ನಾಳೆಯ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಉತ್ತಮ ಲಯ ಕಂಡುಕೊಂಡು 12ನೆ ವಿಶ್ವಕಪ್‍ನಲ್ಲಿ ಮೊದಲ ಜಯ ಗಳಿಸುವ ಕಾತರದಲ್ಲಿ ಹರಿಣಿಗಳಿದ್ದರೆ, ಆರಂಭಿಕ ಪಂದ್ಯದಲ್ಲೇ ಗೆಲುವಿನ ಮಿಂಚನ್ನು ಹರಿಸಲು ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಸಜ್ಜಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!