ದೋಸ್ತಿ ಪಕ್ಷಗಳ ಮೂವರು ಪ್ರಭಾವಿ ನಾಯಕರಿಗೆ ಗಾಳ ಹಾಕಿದಿಯಾ ಬಿಜೆಪಿ..!

ಬೆಂಗಳೂರು: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎನ್ನುತ್ತಲೇ ಬಿಜೆಪಿ ದೋಸ್ತಿ ಪಕ್ಷಗಳ ಮೂವರು ಪ್ರಭಾವಿ ನಾಯಕರಿಗೆ ಗಾಳ ಹಾಕಿದೆ.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ರೆಡ್ಡಿ ಸಮು ದಾಯದ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಪಕ್ಷಕ್ಕೆ ಕರೆ ತರಲು ಸ್ವತಃ ರಾಷ್ಟ್ರೀಯ ನಾಯಕರೊಬ್ಬರು ಅಖಾಡಕ್ಕಿಳಿದಿದ್ದಾರೆ
.

ಮೂಲಗಳ ಪ್ರಕಾರ ಈಗಾಗಲೇ ಈ ಮೂವರ ಜತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು , ಪಕ್ಷಕ್ಕೆ ಕರೆ ತರುವ ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯಾ ಧ್ಯಕ್ಷ ಯಡಿಯೂರಪ್ಪನವರಿಗೆ ವಹಿಸಲಾಗಿದ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ ವೇಳೆ ಬಿಜೆಪಿಗೆ ಸೇರ್ಪಡೆಯಾಗುವವರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ನೀಡಿದ್ದರು.

ಮೂವರು ಬರುವುದಾದರೆ ವಿಳಂಬ ಮಾಡದೆ ಕರೆ ತನ್ನಿ. ಇದರಿಂದ ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಬಿಜೆಪಿ ಇನ್ನಷ್ಟು ಭದ್ರ ನೆಲೆ ಊರುತ್ತದೆ. ಇದರ ಹೊಣೆಗಾರಿಕೆಯನ್ನು ನೀವಲ್ಲದೆ ಬೇರೆ ಯಾರಿಗೂ ಹೊರಿಸಬೇಡಿ ಎಂಬ ಸಲಹೆಯನ್ನು ನೀಡಿದ್ದರು.

ರಾಷ್ಟ್ರೀಯ ನಾಯಕರಿಂದ ಹಸಿರು ನಿಶಾನೆ ಬಂದ ನಂತರವೇ ಯಡಿಯೂರಪ್ಪ ತಮ್ಮ ವರಸೆಯನ್ನು ಬದಲಾಯಿಸಿದರು. ನಾವು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಸರ್ಕಾರ ಬೀಳುವವರೆಗೂ ಸಹನೆಯಿಂದ ಕಾಯುತ್ತೇವೆ ಎಂದು ಹೇಳಿದ್ದರ ಮರ್ಮವೇ ಈ ಮೂವರು ನಾಯಕರಿಗೆ ಗಾಳ ಹಾಕಿರುವುದು ಎಂದು ಬಿಜೆಪಿ ವಲಯದಲ್ಲಿ ಹಬ್ಬಿದೆ.

ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ಎಚ್. ವಿಶ್ವನಾಥ್ ತೀರ್ಮಾನಿಸಿದ್ದಾರೆ. ಇನ್ನು ಮೈಸೂರಿನಲ್ಲಿ ತಮ್ಮನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕಡೆಗಣಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರಾಗಿರುವ ಜಿ.ಟಿ.ದೇವೇಗೌಡ ಅವರು ಅಸಮಾಧಾನಗೊಂಡಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಮನ್ನಣೆ ನೀಡಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಬೇಸರ ಅವರಲ್ಲಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾದ ವೇಳೆ ಜಿ.ಟಿ.ದೇವೇಗೌಡರು ತಮಗೆ ಉನ್ನತ ಶಿಕ್ಷಣ ಖಾತೆ ಬದಲು ಬೇರೊಂದು ಖಾತೆಯನ್ನು ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು. ಆದರೆ ಪಟ್ಟು ಹಿಡಿದು ಅದೇ ಖಾತೆಯಲ್ಲಿ ಮುಂದುವರೆಯುವಂತೆ ಪಕ್ಷದ ನಾಯಕರು ಹಠ ಹಿಡಿದಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಉನ್ನತ ಶಿಕ್ಷಣ ಸಚಿವರಾಗಿ ಮುಂದುವರೆದಿದ್ದಾರೆ.

ಈ ಹಿಂದೆ ಜಿ.ಟಿ.ದೇವೇಗೌಡರು ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದರು. ನಂತರ ಜೆಡಿಎಸ್‍ಗೆ ಸೇರ್ಪಡೆಯಾದರು. ಕಾಂಗ್ರೆಸ್‍ನ ಅತ್ಯಂತ ಹಿರಿಯ ಮುಖಂಡ ಎನಿಸಿರುವ ಬೆಂಗಳೂರಿನ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿಯವರಿಗೆ ಕೂಡ ಬಿಜೆಪಿ ಗಾಳ ಹಾಕಿದೆ.

ರಾಮಲಿಂಗಾರೆಡ್ಡಿ ಬಿಜೆಪಿಗೆ ಬಂದರೆ ಅವರನ್ನು ಕೆಂಪು ರಕ್ತಗಂಬಳಿಯಿಂದ ಪಕ್ಷಕ್ಕೆ ಬರ ಮಾಡಿ ಕೊಳ್ಳುವಂತೆ ರಾಷ್ಟ್ರೀಯ ನಾಯಕರೇ ಸಲಹೆ ಮಾಡಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ರೆಡ್ಡಿ ಸಮುದಾಯ ದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿರುವ ಅವರು ಬಿಜೆಪಿಗೆ ಬಂದರೆ ರಾಜಧಾನಿಯಲ್ಲಿ ಇನ್ನಷ್ಟು ಪಕ್ಷಕ್ಕೆ ಬಲ ಬರುತ್ತದೆ. ಹೀಗಾಗಿ ಅವರನ್ನು ಕರೆ ತರಲು ರಾಜ್ಯ ನಾಯಕರಿಗೆ ಸೂಚನೆ ಕೊಡಲಾಗಿದೆ.

ಸಾಮಾನ್ಯವಾಗಿ ಎಂದೂ ಕೂಡ ಪಕ್ಷದ ವರಿಷ್ಠರ ವಿರುದ್ಧ ಮಾತನಾಡದೆ ಇದ್ದ ರಾಮಲಿಂಗಾರೆಡ್ಡಿ ಮೊದಲ ಬಾರಿಗೆ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಅವರ ಈ ಹೇಳಿಕೆ ಪಕ್ಷ ಬಿಡುವ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತದೆ.

Share Post

Leave a Reply

error: Content is protected !!