ಕೊಲೆ ಆರೋಪಿಗೆ ಆನೇಕಲ್ ಪೊಲೀಸರ ಗುಂಡೇಟು..!

ಬೆಂಗಳೂರು: ದರೋಡೆ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯಡಿಯೂರು ಮೂಲದ ಶಶಾಂಕ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ರಾಜಾಜಿನಗರ ಮತ್ತು ಕೋಣನಕುಂಟೆ ಪೊಲೀಸ್ ಠಾಣೆ ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಎರಡು ಕೊಲೆ, ಮೂರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಈತ ಪೊಲೀಸರಿಗೆ ಬೇಕಾಗಿದ್ದನು.ಅತ್ತಿಬೆಲೆ ವ್ಯಾಪ್ತಿಯ ಬಳ್ಳೂರು ಗೇಟ್ ಬಳಿ ರಾತ್ರಿ 11 ಗಂಟೆ ಸಮಯದಲ್ಲಿ ಆರೋಪಿ ಶಶಾಂಕ್ ಬೈಕ್‍ನಲ್ಲಿ ಹೋಗುತ್ತಿರುವ ಬಗ್ಗೆ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ವೃತ್ತ ನಿರೀಕ್ಷಕ ಗಿರೀಶ್ ಮತ್ತು ಆರಕ್ಷಕ ಉಪನಿರೀಕ್ಷಕ ಮುರಳೀಧರ ಅವರನ್ನೊಳಗೊಂಡ ತಂಡ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.ಆರೋಪಿಯನ್ನು ಹಿಡಿಯಲು ಮುಂದಾದ ಕಾನ್ಸ್‍ಟೆಬಲ್ ಪ್ರಕಾಶ್ ಅವರ ಕೈಗೆ ಚಾಕುವಿನಿಂದ ಇರಿದು ಶಶಾಂಕ್ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಗಿರೀಶ್ ಅವರು ಶರಣಾಗುವಂತೆ ಎಚ್ಚರಿಸಿದರಾದರೂ ಶಶಾಂಕ್ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಶಶಾಂಕ್ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.ತಕ್ಷಣ ಪೊಲೀಸರು ಈತನನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಜಿಲ್ಲಾ ಅಧೀಕ್ಷಕ ರಾಮ್‍ನಿವಾಸ್ ಸಪಟ್, ಉಪ ಜಿಲ್ಲಾ ಅಧೀಕ್ಷಕ ಸುಜಿತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!