ಗ್ರಾಮ ವಾಸ್ತವ್ಯ ಡ್ರಾಮಾ ಬಿಡಿ, ಬರ ಪರಿಹಾರ ಕೈಗೊಳ್ಳಿ.. ಸಿಎಂ ವಿರುದ್ಧ ಸುರೇಶ್‌ಗೌಡ ವಾಗ್ದಾಳಿ

ಬೆಂಗಳೂರು : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದಿಂದ ರಾಜ್ಯಕ್ಕೂ ಒಳ್ಳೆಯದಾಗಲ್ಲ. ಅವರ ಪಕ್ಷಕ್ಕೂ ಒಳ್ಳೆಯದಾಗಲ್ಲ. ಗ್ರಾಮ ವಾಸ್ತವ್ಯ ಎನ್ನುವ ಡ್ರಾಮಾ ಬಿಟ್ಟು ಬರ ಪರಿಹಾರ ಕಾಮಗಾರಿ ಕೈಗೆತ್ತುಕೊಳ್ಳಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜನಂತೆ ಇದ್ದ ಕುಮಾರಸ್ವಾಮಿ ರಾಜಧರ್ಮ ಪಾಲಿಸಲಿಲ್ಲ. ಅದಕ್ಕಾಗಿ ಮಂಡ್ಯ, ತುಮಕೂರಿನಲ್ಲಿ ಅವರ ಅಭ್ಯರ್ಥಿಗಳು ಸೋತರು. ಪಾಪ ಮಾಡಿದ ಮೇಲೆ ಪಶ್ಚಾತಾಪ ಪಡಲೇಬೇಕು. ತೀರ್ಥಯಾತ್ರೆಗೆ ಹೋದರೂ ಅಷ್ಟೇ ಗ್ರಾಮ ವಾಸ್ತವ್ಯಕ್ಕೆ ಹೋದರೂ ಅಷ್ಟೇ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ನಿರ್ಧಾರಕ್ಕೆ ವ್ಯಂಗ್ಯವಾಡಿದರು.

ಗ್ರಾಮ ವಾಸ್ತವ್ಯ ಕೇವಲ ಡ್ರಾಮಾ ಕಂಪನಿ ಇದ್ದ ಹಾಗೆ. ಅಲ್ಲಿ ಅವರ ಕಾರ್ಯಕರ್ತರೇ ಬರುತ್ತಾರೆ‌. ಗ್ರಾಮ ವಾಸ್ತವ್ಯದಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ. ಅವರ ಪಕ್ಷಕ್ಕೆ ಒಳ್ಳೆಯದಾಗಲ್ಲ. ಗ್ರಾಮ ವಾಸ್ತವ್ಯ ಯಾವ ರೀತಿ ಅಂದರೆ ಮಹಾಭಾರತದಲ್ಲಿ ಹಾಗಲಕಾಯಿಗೆ ತೀರ್ಥ ಸ್ನಾನ ಮಾಡಿಸಿದಂತೆ‌ ಎಂದರು.

ಕಳದ 65 ವರ್ಷದಲ್ಲಿ ಕುಡಿಯುವ ನೀರಿಗೆ ಇಷ್ಟೊಂದು ಸಮಸ್ಯೆಯಾಗಿರಲಿಲ್ಲ. ರಾಜ್ಯದಲ್ಲಿ ಬರಗಾಲವಿದೆ, ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಮೊದಲು ಅಧಿಕಾರಿಗಳ ಸಭೆ ನಡೆಸಿ ಕೆರೆಗಳ ಹೂಳೆತ್ತುವ ಕೆಲಸ‌ಮಾಡಿಸಿ, ಕುಡಿಯುವ ನೀರು ಹಾಗು ಮೇವು ಪೂರೈಕೆ ವ್ಯವಸ್ಥೆ ಮಾಡಿ. ನಂತರ ಬೇಕಿದ್ದರೆ ಗ್ರಾಮ ವಾಸ್ತವ್ಯ ಮಾಡಿ ಎಂದು ಕುಟುಕಿದರು.

Share Post

Leave a Reply

Your email address will not be published. Required fields are marked *

error: Content is protected !!