ಮಳೆ ಬರಬಾರದೆಂದು ಇಟ್ಟಿಗೆ ಬಟ್ಟಿ ಬಳಿ ಶಿವಲಿಂಗ ಪ್ರತಿಷ್ಠಾಪನೆ..!

ಚಿತ್ರದುರ್ಗ, ಮೇ28 : ಕತ್ತಲು ಕವಿದಂತೆ ಮೋಡಗಳ ನರ್ತನ, ಗುಡುಗು, ಮಿಂಚಿನ ಆರ್ಭಟ, ಇನ್ನೇನು ಮಳೆ ಬಂತು ಎನ್ನುವಷ್ಟರಲ್ಲಿ ಬಿರುಗಾಳಿಗೆ ಮೋಡಗಳು ನಾಪತ್ತೆಯಾಗುತ್ತವೆ. ಇದರಿಂದ ಆತಂಕಗೊಂಡ ಬಯಲುಸೀಮೆಯ ರೈತರು ಸಾರ್ವಜನಿಕರು ಮಳೆಬಾರದೆ ಕಂಗಾಲಾಗಿ ದೇವರ ಪಾರ್ಥನೆ, ಕತ್ತೆ-ಕಪ್ಪೆಗಳ ಮದುವೆ, ಜಲಾಭಿಷೇಕ ಸೇರಿದಂತೆ ಹಲವು ಪೂಜೆ ಪುರಸ್ಕಾರಗಳ ಮೊರೆ ಹೋಗುತ್ತಿದ್ದಾರೆ.  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸುತ್ತಮುತ್ತ, ಹಿರಿಯೂರು ಸೇರಿದಂತೆ ವಿವಿಧ ಕಡೆ ಮಳೆಯಾಗುತ್ತಿದ್ದರೂ ನಮ್ಮ ಸುತ್ತಾ ಮಳೆ ಬಾರದೆ ಇರುವುದಕ್ಕೆ ಮಳೆ ಬರದಂತೆ ಯಾರೋ ಏನೋ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮಣ್ಣಿನ ಇಟ್ಟಿಗೆ ತಯಾರಿಸುವ ಇಟ್ಟಿಗೆ ಬಟ್ಟಿ ಬಳಿ ಬೃಹತ್ ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೀಡುಮಾಡಿದೆ. ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಂತಿರುವ ನರಹರಿನಗರದ ಮೂರ್ತಿ ಮಿಲ್ ಹಿಂಭಾಗದಲ್ಲಿ ಒರಿಸ್ಸಾ ಮೂಲದವರು ಮಣ್ಣಿನಿಂದ ಇಟ್ಟಿಗೆ ತಯಾರಿಸಿ ಬಯಲಿನಲ್ಲೇ ಬಟ್ಟಿಯಿಂದ ಇಟ್ಟಿಗೆ ಸುಡುತ್ತಾರೆ. ಮಳೆ ಬಂದರೆ ಇಟ್ಟಿಗೆ ಬಟ್ಟಿ ಹಾಗೂ ಇಟ್ಟಿಗೆ ಮಳೆಗೆ ಕರಗುತ್ತವೆ ಎಂಬ ಉದ್ದೇಶದಿಂದ ಇಟ್ಟಿಗೆ ಬಟ್ಟಿ ಬಳಿ ಬೃಹತ್ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಮಾಡಿ ಅರಿಶಿಣ,ಕುಂಕುಮ ಲೇಪ ಮಾಡಿ ಅನ್ನ ಬಲಿ ಹಾಕಿ ವಿಶೇಷ ಪೂಜೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇತ್ತ ಬಯಲುಸೀಮೆಯ ಜನರು ಮಳೆ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆ ಕುಂಠಿತವಾಗಿ ಕಂಗಾಲಾಗಿದ್ದಾರೆ. ಆದರೆ ಇಟ್ಟಿಗೆ ಹಾಳಾಗುತ್ತವೆ ಎಂಬ ದುರುದ್ದೇಶದಿಂದ ಒರಿಸ್ಸಾ ಮೂಲದ ಇಟ್ಟಿಗೆ ತಯಾರಿಕರು ಇಂತಹ ಮೌಢ್ಯತೆ ಮಾರುಹೋಗಿ ಮಳೆ ಬರದಂತೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಕಳೆದ ಸಾಲಿನಂತೆ ಈ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಬಾರದೆ ರೈತರು ಮುಗಿಲು ಕಡೆಗೆ ನೋಡುವಂತಹ ಸ್ಥಿತಿ ನಿರ್ಮಾಣವಾಗಿದ್ದು. ಮಳೆಯಿಲ್ಲದೆ ಬೋರ್ ವೆಲ್ ,ಬಾವಿಗಳು ಬತ್ತಿವೆ, ಇಂತಹ ಪರಿಸ್ಥಿತಿಯಲ್ಲಿ ಸಮೃದ್ಧಿ ಮಳೆಯಾಗಲಿ,ಬಯಲುಸೀಮೆಯಲ್ಲಿ ಹಸಿರು ಕ್ರಾಂತಿಯಾಗಲಿ ಎಂದು ಜನರು ದೇವರ ಮೊರೆ ಹೋಗುತ್ತಿದ್ದಾರೆ. ಇತ್ತೆ ಮಳೆ ಬಂದರೆ ಇಟ್ಟಿಗೆ ಬಟ್ಟಿ ಕರಗಿ ನಷ್ಟವಾಗುತ್ತದೆ ಎಂದು ಇಟ್ಟಿಗೆ ಬಟ್ಟಿ ಸುತ್ತ ಮೌಢ್ಯತೆಯ ಮೊರೆ ಹೋಗಿ ಬರುವ ಮಳೆಯನ್ನು ತಡೆಯಲು ಬೃಹತ್ ವಿಗ್ರಹ ಪ್ರತಿಷ್ಠಾಪನೆ ವಿಶೇಷ ಪೂಜೆ ಮೊರೆಹೋಗಿದ್ದಾರೆ. ಒರಿಸ್ಸಾ ಮೂಲದ ಇಟ್ಟಿಗೆ ತಯಾರಿಕಾ ಪತ್ರಿಕೆಯೊಂದಿಗೆ ಮಾತನಾಡಿ ಮಳೆ ಬಂದರೆ ಇಟ್ಟಿಗೆ ಕರಗಿಹೋಗುತ್ತದೆ, ಇಟ್ಟಿಗೆ ಬಟ್ಟಿ ಸುಡಲು ಅಡ್ಡಿಯಾಗುತ್ತದೆ. ಆದ್ದರಿಂದ ಬೃಹತ್ ಲಿಂಗವನ್ನು ಪ್ರತಿಷ್ಠಾಪಿಸಿ ಮಳೆ ಬರದಂತೆ ವಿಶೇಷ ಪೂಜೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ರಾಜ್ಯ ರೈತಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಬಯಲುಸೀಮೆಯ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಇಟ್ಟಿಗೆ ಬಟ್ಟಿ ಮಾಲೀಕ ಮೌಢ್ಯತೆ ಆಚರಣೆ ಮಾಡುವ ಮೂಲಕ ಬರುವ ಮಳೆಗೆ ಅಡ್ಡಿಪಡಿಸುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಮೀರ್ ಪತ್ರಿಕೆಯೊಂದಿಗೆ ಮಾತನಾಡಿ ಪ್ರತಿನಿತ್ಯ ರಾತ್ರಿಯಾದರೆ ಸಾಕು ಮಳೆ ಮೋಡ,ಮಿಂಚು,ಗುಡುಗು ಪ್ರಾರಂಭವಾಗಿ ಮಳೆ ಬಂತು ಅನ್ನುವಷ್ಟರಲ್ಲಿ ಗಾಳಿಗೆ ಮೋಡಗಳು ತೇಲಿ ಹೋಗಿ ಮಳೆ ಬಾರದೆ ಜನರಲ್ಲಿ ನಿರಾಶೆ ಮೂಡಿಸುವುದರಿಂದ ಇಟ್ಟಿಗೆ ಬಟ್ಟಿ ಮಾಲೀಕರು ಮಾಡಿರುವ ಮೌಢ್ಯಕ್ಕೂ ಇದಕ್ಕೂ ಸಂಬಂಧವಿದೆ ಎಂಬಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಿವಲಿಂಗ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೀಡುಮಾಡಿದೆ.

Share Post

Leave a Reply

error: Content is protected !!