ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಮೊದಲ ಸವಾಲು ಎದುರಾಗಿದೆ..!

ಬೆಂಗಳೂರು :  ರಾಜ್ಯ ಮೈತ್ರಿ ಸರ್ಕಾರಕ್ಕೆ ಸಡ್ಡು ಹೊಡೆದು ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಇದೀಗ ರೈತರ ಬೆಳೆಗೆ ನೀರು ಬಿಡುಗಡೆಗೊಳಿಸುವ ಮೊದಲ ಸವಾಲು ಎದುರಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಸ್ಥಳೀಯ ಮಟ್ಟದಲ್ಲಿಯೂ ಜೆಡಿಎಸ್‌ ಎಂಬ ಭದ್ರಕೋಟೆ ಇದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಈ ಕೋಟೆಯ ಸುಳಿಯಲ್ಲಿ ಅವರು ಸಿಲುಕಿದ್ದಾರೆ. ರೈತರ ಬೆಳೆಗಳಿಗೆ ನೀರು ಬಿಡಿಸುವ ಹೊಣೆಯನ್ನು ಸುಮಲತಾ ಅವರಿಗೆ ಜಿಲ್ಲೆಯ ಜೆಡಿಎಸ್‌ ಮುಖಂಡರು ವಹಿಸುವ ಮೂಲಕ ರಾಜಕೀಯ ಪರೀಕ್ಷೆಗೊಳಪಡಿಸಿದ್ದಾರೆ.

ರೈತರ ಬೆಳೆಗಳಿಗೆ ಕಾವೇರಿ ನಾಲೆಗಳಿಂದ ನೀರು ಬಿಡುಗಡೆ ಮಾಡಬೇಕಾದರೆ ನೀರು ನಿರ್ವಹಣಾ ಮಂಡಳಿಯ ಅನುಮತಿ ಅಗತ್ಯ. ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುವ ಕಾರಣ ಅವರು ಕೇಂದ್ರದ ಮೇಲೆ ಒತ್ತಡ ತಂದು ನೀರು ಹರಿಸಬಹುದಾದರೂ ಸವಾಲಂತೂ ಇದ್ದೇ ಇದೆ.

ಮಂಡ್ಯ ಜಿಲ್ಲೆಯಲ್ಲಿ ಅಷ್ಟದಿಕ್ಪಾಲಕರಾಗಿ ಜೆಡಿಎಸ್‌ನ ಮುಖಂಡರುಗಳಿದ್ದರೂ ಪಕ್ಷದ ಭದ್ರಕೋಟೆಯನ್ನು ಸುಮಲತಾ ಛಿದ್ರಗೊಳಿಸಿದ್ದಾರೆ. ತಮಗಾಗಿರುವ ಅವಮಾನವನ್ನು ತೀರಿಸಿಕೊಳ್ಳಲು ಜೆಡಿಎಸ್‌ ನಾಯಕರು ಸುಮಲತಾ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಷಡ್ಯಂತ್ರ ರೂಪಿಸುವಲ್ಲಿ ತೊಡಗಿದ್ದಾರೆ. ಇದರ ಮೊದಲ ಅಸ್ತ್ರವೇ ರೈತರಿಗೆ ನೀರು ಬಿಡುವ ವಿಚಾರವಾಗಿದೆ. ಇದೇ ವಿಚಾರವಾಗಿಟ್ಟುಕೊಂಡು ರಾಜಕೀಯ ದಾಳ ಹಾಕಲು ಮುಂದಾಗಿದ್ದಾರೆ. ರೈತರಿಗೆ ನೀರು ಹರಿಸುವ ವಿಚಾರ ಸಂಬಂಧ ಸಮಲತಾ ಅವರಿಗೆ ಎದುರಾಗಿರುವ ಮೊದಲ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗಿದೆ. ಈ ಸವಾಲನ್ನು ಯಾವ ರೀತಿಯಲ್ಲಿ ಎದುರಿಸಲಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

Share Post

Leave a Reply

error: Content is protected !!