2ನೇ ಅವಧಿಗೆ ಮೋದಿ ಪ್ರಧಾನಿ ಹುದ್ದೆಗೇರಲು ವೇದಿಕೆ ಸಿದ್ದ

ನವದೆಹಲಿ: ವಿಶ್ವದ ಗಮನಸೆಳೆದಿದ್ದ ಭಾರತದ 17ನೇ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವತ್ತ ದಾಪುಗಾಲಿಟ್ಟಿದ್ದು, ನರೇಂದ್ರ ಮೋದಿ 2ನೇ ಅವಧಿಗೆ ಪ್ರಧಾನಿಯಾಗಲು ವೇದಿಕೆ ಸಿದ್ದಗೊಂಡಿದೆ.

ಚುನಾವಣೋತ್ತರ ಸಮೀಕ್ಷೆಯ ಪ್ರಕಾರವೇ ಒಟ್ಟು 542 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‍ಡಿಎ 340ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮತ್ತೊಮ್ಮೆ ಸ್ಪಷ್ಟ ಜನಾದೇಶ ಪಡೆಯುವತ್ತ ದಾಪುಗಾಲಿಟ್ಟಿದೆ.

ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರವಿಡಲು ಚುನಾವಣೆ ನಂತರ ಹಾಗೂ ಮತದಾನದ ಬಳಿಕ ಭಾರೀ ಸರ್ಕಸ್ ನಡೆಸಿದ್ದ ಪ್ರತಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ. ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೂ ತೀವ್ರ ಮುಖಭಂಗವಾಗಿದೆ.
ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ 10 ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ವ್ಯವಸ್ಥಿತ ಪ್ರಚಾರವು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದೆ. ಮುಖ್ಯವಾಗಿ ನಿರುದ್ಯೋಗ, ಆರ್ಥಿಕ ಕುಸಿತ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಯಾವುದೇ ವಿಷಯಗಳು ಮತದಾರರ ಮೇಲೆ ಪರಿಣಾಮ ಬೀರಿಲ್ಲ.

ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲ್‍ಕೋಟ್‍ನಲ್ಲಿ ಉಗ್ರರ ಶಿಬಿರಗಳ ಮೇಲೆ ನಡೆದ ವೈಮಾನಿಕ ದಾಳಿ, ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹ, ರಾಷ್ಟ್ರೀಯತೆ ಸೇರಿದಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದ ಮೋದಿ ಮೋಡಿಗೆ ಮತದಾರ ತಲೆ ಬಾಗಿದ್ದಾನೆ.

ಇವಿಎಂನ ವಿವಿಪ್ಯಾಟ್ ತಾಳೆ ಹಾಕಿ ಫಲಿತಾಂಶವನ್ನು ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿರುವುದರಿಂದ ಅಧಿಕೃತ ಫಲಿತಾಂಶ ಘೋಷಣೆಯಾಗುವುದು ತುಸು ವಿಳಂಬವಾಗಲಿದೆ.

ಭಾರೀ ನಿರೀಕ್ಷೆ ಮೂಡಿಸಿದ್ದ ಕರ್ನಾಟಕದಲ್ಲಿ ದೋಸ್ತಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿದೆ.

ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಕರ್ನಾಟಕದಲ್ಲಿ ಬಿಜೆಪಿಯ ಅತ್ಯುತ್ತಮ ಸಾಧನೆ ಇದಾಗಿದೆ. 2009ರಲ್ಲಿ ಮಾತ್ರ ಅಂದು ಅಧಿಕಾರದಲ್ಲಿದ್ದ ಬಿಜೆಪಿ 19 ಸ್ಥಾನಗಳನ್ನು ಗೆದ್ದಿದ್ದು, ಈವರೆಗಿನ ಉತ್ತಮ ಸಾಧನೆಯಾಗಿತ್ತು.

ಹಿಂದಿನ ದಾಖಲೆಯನ್ನು ಅಳಿಸಿ ಹಾಕಿ ನರೇಂದ್ರ ಮೋದಿ ಅಲೆಯಲ್ಲಿ ಕಮಲ ಮತ್ತೆ ಅರಳಿದೆ. ದಶಕಗಳ ನಂತರ ಸತತ 2ನೇ ಬಾರಿಗೆ ಸ್ಪಷ್ಟ ಬಹುಮತ ಪಡೆದ ಹೆಗ್ಗಳಿಕೆಗೂ ಪಾತ್ರವಾಗಿದೆ.

ದೋಸ್ತಿ ಪಕ್ಷಗಳು ಕೇವಲ 2 ಸ್ಥಾನಗಳಿಗೆ ಸೀಮಿತವಾಗಿದ್ದರೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

# ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್..!
ಹದಿನೇಳನೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಗಳಿಸಿದ್ದ ನರೇಂದ್ರ ಮೋದಿ ಮೇ 26ರಂದು ಸಂಜೆ ರಾಜಧಾನಿ ದೆಹಲಿಯಲ್ಲಿ ಎರಡನೇ ಬಾರಿ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ 2014ರ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಮೋದಿ ಇದೇ ದಿನ (ಮೇ 26 ) ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಾಳೆ ಬಿಜೆಪಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದೆ.

ಇದಕ್ಕೂ ಮುನ್ನ ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ಮೋದಿಯವರನ್ನು ಆಯ್ಕೆ ಮಾಡಲಾಗುತ್ತದೆ. ಸರ್ಕಾರ ರಚಿಸಲು ರಾಷ್ಟ್ರಪತಿ ಆಹ್ವಾನ ನೀಡಿದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದ್ದು, ಮೇ 26ರಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ಕೋವಿಂದ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಹಿರಿಯ ಮುಖಂಡರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.

# ಮಹಾಘಟಬಂಧನ್ ವಿಫಲ:
ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ಹಾಗೂ ಬಿಜೆಪಿಯ ಅಶ್ವಮೇಧ ಯಾಗದ ಕುದರೆಯನ್ನು ಕಟ್ಟಿ ಹಾಕುತ್ತೇವೆ ಎಂದು ಅಬ್ಬರಿಸಿದ ಬಿಜೆಪಿಯೇತರ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ
.

ದೆಹಲಿ ಗದ್ದುಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 50ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದಿದೆ.

ಎಸ್‍ಪಿ-ಬಿಎಸ್‍ಪಿ ಮೈತ್ರಿ ಮೂಲಕ ಮಹಾಘಟ್‍ಬಂಧನ್ ರಚಿಸಿದ್ದ ಅಖಿಲೇಶ್ ಹಾಗೂ ಮಾಯವತಿ ಮತದಾರರ ಮೇಲೆ ಅಲ್ಪ ಪ್ರಮಾಣದ ಪ್ರಭಾವವನ್ನು ಬೀರಿದ್ದಾರೆ.  2014ರ ಲೋಕಸಭೆ ಚುನಾವಣೆಯಲ್ಲಿ ಈ ರಾಜ್ಯದಿಂದಲೇ 73 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಸ್ಥಾನ ಗಳಿಕೆಯಲ್ಲಿ ಇಳಿಕೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾರರು ಕೈಬಿಟ್ಟಿಲ್ಲ.

# ದೀದಿ ಕೋಟೆಗೆ ಲಗ್ಗೆ:
ಚುನಾವಣೆಗೂ ಮುನ್ನವೇ ಒಂದಿಲ್ಲೊಂದು ಕಾರಣ ಹಾಗೂ ಹಿಂಸಾಚಾರದಿಂದಲೇ ರಾಷ್ಟ್ರದ ಗಮನ ಸೆಳೆದಿದ್ದ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿಯ ಕೋಟೆಯನ್ನು ಕೆಡುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗಿದೆ.

ರಾಜ್ಯದ ಒಟ್ಟು 40 ಲೋಕಸಭಾ ಕ್ಷೇತ್ರ ಪೈಕಿ ಬಿಜೆಪಿ 15 ಸ್ಥಾನ ಪಡೆದರೆ, ಟಿಎಂಸಿ 23, ಕಾಂಗ್ರೆಸ್ ಮತ್ತು ಎಡಪಕ್ಷಗಳು ತಲಾ ಒಂದೊಂದು ಸ್ಥಾನದಲ್ಲಿ ಗೆದ್ದಿವೆ. ಶತಾಯಗತಾಯ ಮಮತ ಬ್ಯಾನರ್ಜಿಯ ತವರೂರು ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯನ್ನು ಕೆಡವಲೇಬೇಕೆಂದು ತೀರ್ಮಾನಿಸಿದ್ದ ನರೇಂದ್ರ ಮೋದಿ ಅಮಿತ್ ಷಾ ಜೋಡಿಯ ಪರಿಶ್ರಮಕ್ಕೆ ಬಂಗಾಳದ ಜನತೆ ಪ್ರತಿಫಲ ನೀಡಿದ್ದಾರೆ.

# ಹಿಂದಿ ರಾಜ್ಯಗಳಲ್ಲಿ ಅಬ್ಬರಿಸಿದ ಮೋದಿ:
ಹಿಂದಿ ರಾಜ್ಯಗಳಲ್ಲೂ ಕಳೆದ ಬಾರಿಯಂತೆ ಈ ಬಾರಿ ನರೇಂದ್ರ ಮೋದಿ ಅಲೆಯ ಮುಂದೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಧೂಳೀಪಟವಾಗಿವೆ.  ಪ್ರಮುಖವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ ಹಾಗೂ ಬಿಜೆಪಿ ಆಡಳಿತವಿರುವ ಜಾರ್ಖಂಡ್, ಉತ್ತರಖಂಡ್, ಹಿಮಾಚಲ ಪ್ರದೇಶ, ಹರಿಯಾಣ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಹುತೇಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

ಜೊತೆ ಪ್ರಧಾನಿ ತವರೂರು ಗುಜರಾತ್‍ನಲ್ಲಿ 26 ಲೋಕಸಭಾ ಕ್ಷೇತ್ರಗಳ ಪೈಕಿ 24 ಸ್ಥಾನಗಳನ್ನು ಗೆದ್ದು ಬೀಗಿದೆ. ಹರಿಯಾಣದಲ್ಲೂ 10 ಸ್ಥಾನಗಳಲ್ಲಿ ಬಹುತೇಕ ಬಿಜೆಪಿ ಪಾಲಾಗಿದೆ.

ರಾಜಸ್ಥಾನದ 25 ಕ್ಷೇತ್ರಗಳಲ್ಲಿ ಬಿಜೆಪಿ 22, ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 26, ದೆಹಲಿಯ 7 ಕ್ಷೇತ್ರಗಳ ಪೈಕಿ 6, ಛತ್ತೀಸ್‍ಘಡದ 11 ಕ್ಷೇತ್ರಗಳಲ್ಲಿ 6, ಜಾರ್ಖಂಡ್ 14 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಗೆದ್ದು ಬೀಗಿದೆ.

ಒರಿಸ್ಸಾದ 21 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಈ ಬಾರಿ 12 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ಗೆ ತೀವ್ರ ಮುಖಭಂಗವಾಗಿದೆ.

ಬಿಜೆಪಿ ಮೈತ್ರಿಕೂಟ ಆಡಳಿತವಿರುವ ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ 32 ಕ್ಷೇತ್ರಗಳನ್ನು ಗೆದ್ದರೆ, ದೇಶದ 2ನೇ ಅತಿದೊಡ್ಡ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ ಬಿಜೆಪಿ -ಶಿವಸೇನೆ 40 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷ ಕಾಂಗ್ರೆಸ್-ಎನ್‍ಸಿಪಿ ಧೂಳೀಪಟವಾಗಿವೆ.

ಉತ್ತರ ಭಾರತ, ಮಧ್ಯಭಾರತ ಹಾಗೂ ಈಶಾನ್ಯ ಭಾರತದಲ್ಲಿ ಬಿಜೆಪಿಯ ಕಮಲ ಅರಳಿದ್ದರೆ, ದಕ್ಷಿಣ ಭಾರತದಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳಿಗೆ ಮತದಾರ ಜೈ ಎಂದಿದ್ದಾನೆ.

ಕರ್ನಾಟಕ ಹೊರತುಪಡಿಸಿದರೆ ಉಳಿದ ಯಾವುದೇ ರಾಜ್ಯಗಳಲ್ಲೂ ಬಿಜೆಪಿ ಎರಡಂಕಿಯನ್ನೂ ದಾಟಿಲ್ಲ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂಕೆ ತೀರಾ ಕಳಪೆ ಸಾಧನೆ ಮಾಡಿದೆ.

ಕೇರಳದಲ್ಲಿ ಎಲ್‍ಡಿಎಫ್ ಹಾಗೂ ಯುಡಿಎಫ್ ಸಮಬಲದ ಸ್ಥಾನಗಳನ್ನು ಗಳಿಸಿದ್ದರೆ ತೆಲಂಗಾಣದಲ್ಲಿ ನಿರೀಕ್ಷೆಯಂತೆ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ಮೇಲುಗೈ ಸಾಧಿಸಿದೆ.

ಜಿದ್ದಾಜಿದ್ದಿನಿಂದ ಕೂಡಿದ ಆಂಧ್ರಪ್ರದೇಶದಲ್ಲಿ ಜಗನ್‍ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಅಭೂತ ಪೂರ್ವ ಜನಾದೇಶದ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ.  175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವೈಎಸ್‍ಆರ್‍ಸಿ 135ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದು ನಾಯ್ಡು ವಿರೋಧಿ ಅಲೆಯನ್ನು ಸ್ಪಷ್ಟವಾಗಿ ಸೂಚಿಸಿದೆ.

25 ಲೋಕಸಭಾ ಕ್ಷೇತ್ರಗಳ ಪೈಕಿ ವೈಎಸ್‍ಆರ್‍ಸಿ 24 ಕ್ಷೇತ್ರಗಳನ್ನು ಗೆದ್ದಿದ್ದರೆ ಟಿಡಿಪಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!