ಸಿಎಂ ಆಗೋದ್ರಲ್ಲಿ ತಪ್ಪೇನು? : ಸಿದ್ದು

ಹುಬ್ಬಳ್ಳಿ:ಜನರು ಆಶೀರ್ವಾದ ಮಾಡಿದರೆ ಮತ್ತೆ ಸಿಎಂ ಆಗಬಾರದಾ, ಜನರ ಅಭಿಪ್ರಾಯದಲ್ಲಿ ತಪ್ಪೇನಿದೆ. ಅಭಿಮಾನದಿಂದ ಹೇಳುವವರ ಬಾಯಿ ಮುಚ್ಚಿಸಲು ಸಾಧ್ಯವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ.

ಆದರೂ ಜನರು ಮುಖ್ಯಮಂತ್ರಿಯಾಗಬೇಕೆಂದು ಕೆಲವರು ಹೇಳುತ್ತಾರೆ. ಅವರನ್ನು ತಡೆಯಲು ಸಾಧ್ಯವೇ? ಜನರು ಆಶೀರ್ವಾದ ಮಾಡಿದರೆ ಯಾಕೆ ಆಗಬಾರದು? ಅದರಲ್ಲಿ ತಪ್ಪೇನಿದೆ ಎಂದರು. ನಾನು ಈಗ ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿಲ್ಲ. 2023ಕ್ಕೆ ನಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲೆಂದು ಅಭಿಮಾನಿಗಳು ಹೇಳಿದ್ದಾರೆ ಎಂದರು.

ನಿನ್ನೆ ನಡೆದ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಐಟಿಯವರು ದಾಳಿ ಮಾಡುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಯಾರ ಮೇಲೆ ಯಾವ ಸಮಯದಲ್ಲಿ ಎಂಬುದಕ್ಕೆ ಆಕ್ಷೇಪವಿದೆ. ಕೇವಲ ಕಾಂಗ್ರೆಸ್‍ನವರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ.

ಬಿಜೆಪಿಗರು ಇರುವ ಹೋಟೆಲ್‍ಗಳ ಮೇಲೆ ಮತ್ತು ಯಡಿಯೂರಪ್ಪ ಇದ್ದ ರೂಮ್ ಮೇಲೆ ದಾಳಿ ಮಾಡಿಲ್ಲ. ಐಟಿ ಸಂಸ್ಥೆಯವರು ತಮ್ಮ ಕೆಲಸವನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದರು.

ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರು ಹೇಳಿದ್ದನ್ನೆ ಹತ್ತು ಸಲ ಹೇಳುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. 20 ಶಾಸಕರು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಪದೇ ಪದೇ ಇದೇ ಹೇಳಿದರೆ ಹಾಸ್ಯಾಸ್ಪದವಾಗುತ್ತೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ ಹೇಳಿಕೆ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಚುನಾವಣೆ ಬಳಿಕ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.

ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು ಎಂದು ಟ್ವಿಟ್ ಮಾಡಿದ್ದಾರೆ.

ನನ್ನ ಯಾವ ಕಾರ್ಯಕ್ರಮವೂ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ…. ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವ ವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ ಎಂದು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!