ಲಂಕಾದಲ್ಲಿ ಕೋಮು ಹಿಂಸಾಚಾರ, ಸಾಮಾಜಿಕ ಜಾಲತಾಣಗಳು ಬಂದ್

ಕೊಲಂಬೋ: ಭಯೋತ್ಪಾದಕರ ಸರಣಿ ಬಾಂಬ್ ಸ್ಪೋಟದಿಂದ ತತ್ತರಿಸಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಗ ಕೋಮು ಗಲಭೆಯ ಆತಂಕ ಉಲ್ಬಣಕೊಂಡಿದೆ.

260 ಮಂದಿಯ ದಾರುಣ ಸಾವಿಗೆ ಕಾರಣವಾದ ಈಸ್ಟರ್ ಸಂಡೇ ಉಗ್ರ ದಾಳಿ ಬೆನ್ನಲ್ಲೇ ಶ್ರೀಲಂಕಾ ಸೇನೆ ನಡೆಸಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಲಂಕಾದಲ್ಲಿ ಕೋಮು ಸಂಘರ್ಷ ಉಲ್ಭಣಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಲಂಕಾದಾದ್ಯಂತ ಕಫ್ರ್ಯೂ ಜಾರಿ ಮಾಡಲಾಗಿದೆ.

ಲಂಕಾದಲ್ಲಿ ಮುಸ್ಲಿಮ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಮುಸ್ಲಿಮರ ಒಡೆತನದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಲಾಗುತ್ತಿದೆ. ಅಂತೆಯೇ ಲಂಕಾದ ಹಲವು ಪ್ರದೇಶಗಳಲ್ಲಿ ಕೋಮು ಸಂಘರ್ಷ ಭುಗಿಲೆದಿದ್ದು ಹಲವರು ಗಾಯಗೊಂಡಿದ್ದಾರೆ.

ನಿನ್ನೆಯಿಂದಲೇ ಲಂಕಾದಲ್ಲಿ ಕೋಮುಗಲಭೆ ಆರಂಭವಾಗಿದ್ದು, ಲಂಕಾದ ಕುಲಿಯಪಿತಿಯಾ, ಬಿಂಗಿರಿಯಾ, ದುಮ್ಮಲ ಸುರಿಯಾ ಮತ್ತು ಹೆಟ್ಟಿಫೋಲಾ ಪಟ್ಟಣದಲ್ಲಿ ಕಫ್ರ್ಯೂ ಸಡಿಸಲಾಗಿತ್ತಾದರೂ, ಮತ್ತೆ ಗಲಭೆ ಆರಂಭವಾದ್ದರಿಂದ ಮತ್ತೆ ಕಫ್ರ್ಯೂ ಹೇರಲಾಗಿದೆ.

ಪ್ರಚೋದನಾಕಾರಿ ಫೋಸ್ಟ್ ಕಾರಣ:
ಚರ್ಚ್ ಮೇಲಿನ ಆತ್ಮಹತ್ಯಾ ದಾಳಿ ನಡೆದ ನಂತರ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಪರ ಹಾಗೂ ವಿರೋಧಿ ಫೋಸ್ಟ್‍ಗಳು ಹರಿದಾಡುತ್ತಿದ್ದು, ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಂಕಾ ಸರ್ಕಾರ ನಿನ್ನೆ ಫೇಸ್‍ಬುಕ್ ಹಾಗೂ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.

ಕೋಮು ಗಲಭೆ ಸಂದರ್ಭದಲ್ಲಿ ಉಗ್ರರು ಪರಿಸ್ಥಿತಿಯ ದುರ್ಲಾಭ ಪಡೆದು ದಾಳಿ ನಡೆಸುವ ಆತಂಕವಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!