ದೋಸ್ತಿಗಳ ನಡುವೆ ಮುಂದುವರೆದ ಟ್ವಿಟ್ಟರ್ ವಾರ್, ಇಂದು ಸಿದ್ದು ಟ್ವೀಟ್ ಏನು ಗೊತ್ತ..?

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡುವಿನ ವಾಕ್ಸಮರ ಮತ್ತಷ್ಟು ಮುಂದುವರೆದಿದ್ದು, ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್‍ನಲ್ಲಿ ವಿಶ್ವನಾಥ್ ಅವರನ್ನು ಪರೋಕ್ಷವಾಗಿ ಕೈಲಾಗದವರು ಮೈ ಪರಿಚಿಕೊಂಡಂತೆ ಎಂದು ಲೇವಡಿ ಮಾಡಿದ್ದಾರೆ.

ಟ್ವಿಟರ್ ಮೂಲಕ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ಇಂದು ಸಚಿವ ಜಿ.ಟಿ.ದೇವೇಗೌಡ ಕುರಿತಂತೆ ಮೃದು ಧೋರಣೆ ತಳೆದು ಗೆಳೆಯ ಎಂದು ಸಂಬೋಧಿಸಿದ್ದಾರೆ. ಆದರೆ, ವಿಶ್ವನಾಥ್ ಮೇಲಿನ ಸಿಟ್ಟು ಸಿದ್ದರಾಮಯ್ಯ ಅವರಿಗೆ ಕಡಿಮೆಯಾದಂತಿಲ್ಲ.

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿ ಎಂಬ ಹೆಮ್ಮೆ ನನ್ನದು. ಇದನ್ನ ಪುಸ್ತಕ ಮಾಡಿ ಹಂಚಿದ್ದೇನೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ಧ. ಮೈ ಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ನನ್ನ ವಾದ ಇಲ್ಲ.

ನನ್ನ ಯಾವ ಕಾರ್ಯಕ್ರಮವೂ ಪ್ರಚಾರಕ್ಕಾಗಿ, ಇಲ್ಲವೇ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ ಭಾಗ್ಯ, ಪಶುಭಾಗ್ಯ… ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇವರುವವರೆಗೂ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ ಎಂದು ಟ್ವಿಟರ್‍ನಲ್ಲಿ ತಿರುಗೇಟು ನೀಡಿದ್ದಾರೆ.

ಒಳ್ಳೆಯ ಕೆಲಸ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತೆ. ಇತಿಹಾಸ ಸ್ಮರಿಸುತ್ತದೆ. ದೇವರಾಜ ಅರಸು ಅವರ ಜನಪರ ಕೆಲಸಗಳನ್ನು ಮರೆತು ಜನ ಸೋಲಿಸಿದ್ದರು. ಅವರನ್ನು ಗುರುಗಳೆಂದು ಈಗ ಹೇಳುತ್ತಿರುವ ನಾಯಕರು ಕೂಡಾ ಬಿಟ್ಟು ಓಡಿಹೋಗಿದ್ದರು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಅರಸು ಅವರನ್ನು ಈಗ ಇತಿಹಾಸ ಸ್ಮರಿಸುತ್ತಿದೆ. ಈಷ್ರ್ಯೆಗೆ ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.

ನಿನ್ನೆ ಮಾಡಿದ್ದ ಟ್ವಿಟ್‍ನಲ್ಲಿ ಸಚಿವ ಜಿ.ಟಿ.ದೇವೇಗೌಡ ಮತ್ತು ಎಚ್.ವಿಶ್ವನಾಥ್ ಅವರ ಹೆಸರನ್ನು ಉಲ್ಲೇಖಿಸಿ ಅಸಮಾಧಾನವನ್ನು ಹೊರ ಹಾಕಿರುವ ಸಿದ್ದರಾಮಯ್ಯ ಅವರು ಇಂದು ವಿಶ್ವನಾಥ್ ಬಗ್ಗೆ ಅಷ್ಟೇ ಕಠಿಣ ನಿಲುವುಗಳನ್ನು ಪುನರುಚ್ಚರಿಸಿದ್ದು, ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆ ಬಗ್ಗೆ ಮೃದು ಮಾತುಗಳಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ, ಮೈಸೂರಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದರು, ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು ಎಂದು ಹೇಳಿದರು.

ಈವರೆಗೂ ಬಹಿರಂಗವಾಗಿ ಕೇಳಿಬರುತ್ತಿದ್ದ ಯಾವುದೇ ಟೀಕೆಗಳಿಗೆ ಸಾರ್ವಜನಿಕವಾಗಿ ಹೇಳಿಕೆ ನೀಡದೆ ತಾಳ್ಮೆಯಿಂದಿದ್ದ ಸಿದ್ದರಾಮಯ್ಯ ಅವರು ಏಕಾಏಕಿ ತಮ್ಮ ಸ್ವಭಾವವನ್ನೇ ಬದಲಿಸಿಕೊಂಡಿದ್ದು, ಜೆಡಿಎಸ್ ನಾಯಕರ ವಿರುದ್ಧ ಮುಗಿ ಬಿದ್ದಿದ್ದಾರೆ. ಅವರ ಬೆನ್ನಿಗೆ ಕಾಂಗ್ರೆಸ್ ಪಾಳಯವೂ ನಿಂತಿರುವುದು ರಾಜಕೀಯದಲ್ಲಿ ಮುಂದೇನು ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಪ್ರತಿ ಪಕ್ಷ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ಮಾಡುವ ಟೀಕೆಗಳಿಗಿಂತಲೂ ಕಠಿಣವಾಗಿ ಮಿತ್ರ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಶಾಸಕ ನಾರಾಯಣಗೌಡ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಬಿಜೆಪಿಯಿಂದ 10 ಕೋಟಿ ಪಡೆದಿರುವ ಗಂಭೀರ ಆರೋಪ ಮಾಡಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಾರಾಯಣಗೌಡ ಮತ್ತೆ ರೆಸಾರ್ಟ್‍ನತ್ತ ಓಡಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ದೋಸ್ತಿ ಪಕ್ಷಗಳ ನಾಯಕರು ಪರಸ್ಪರ ಟೀಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕಿದ್ದ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಟೀಕೆಗಳನ್ನು ಮಾಡುತ್ತಿರುವುದು ಹಿರಿಯಕ್ಕನ ಚಾಲು ಮನೆ ಮಂದಿಗೆಲ್ಲ ಎಂಬಂತಾಗಿದೆ. ಕಾಂಗ್ರೆಸ್‍ನ ಇತರೆ ನಾಯಕರಿಗೆ ಸಹಜವಾಗಿ ಇದು ಮತ್ತಷ್ಟು ಕುಮ್ಮಕ್ಕು ನೀಡಿದೆ.
ಮೈತ್ರಿ ಧರ್ಮ ಪಾಲಿಸುವ ಹೇಳಿಕೆ ನೀಡುತ್ತಲೇ ಸಿದ್ದರಾಮಯ್ಯ ಅವರು ವಿಶ್ವನಾಥ್ ಮತ್ತು ಜಿ.ಟಿ.ದೇವೇಗೌಡರ ವಿರುದ್ಧ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!