ಸಮ್ಮಿಶ್ರ ಸರ್ಕಾರಕ್ಕೆ ಸ್ಪರ್ಶ ಜ್ಞಾನವಿಲ್ಲ, ಕಣ್ಣೂ ಕಾಣ್ತಿಲ್ಲ , ಕಿವಿನೂ ಕೇಳ್ತಿಲ್ಲ’ : ಶೋಭಾ

ಕಲಬುರಗಿ,ಮೇ : ಸಮ್ಮಿಶ್ರ ಸರ್ಕಾರಕ್ಕೆ ಸ್ಪರ್ಶ ಜ್ಞಾನ ಇಲ್ಲ ಕಣ್ಣು ಕಾಣಲ್ಲ, ಕಿವಿ ಕೇಳಿಸೋದಿಲ್ಲ. ಸರ್ಕಾರ ಗಾಢ ನಿದ್ರೆಗೆ ಜಾರಿರುವುದರಿಂದ ರಾಜ್ಯದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸಂಕಷ್ಟದಲ್ಲಿದೆ. ಸಮನ್ವಯ ಸಮಿತಿಯಲ್ಲಿ ಯಾವುದೇ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುತ್ತಿಲ್ಲ. ಬರೀ ಸಂಘರ್ಷವೇ ಪ್ರದಾನವಾಗಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಹಿಂದುಳಿದ ವರ್ಗಕ್ಕೆ ಅವರು ಏನೂ ಮಾಡಿಲ್ಲ. ಬರೀ ಬಡಾಯಿ ಎಂದು ಟೀಕಿಸಿದರು.

ವಿಶ್ವನಾಥ್ ಅವರು ಸತ್ಯವಾದ ಮಾತು ಹೇಳಿದ್ದಾರೆ. ಹಿಂದುಳಿದ ವರ್ಗದ ಚಾಂಪಿಯನ್ ಎಂದು ಸಿದ್ದರಾಮಯ್ಯ ಸಿಎಂ ಆದರು, ನಂತರ ಜಾತಿ ಜಾತಿಯಲ್ಲಿ ಜಗಳ ಹಚ್ಚಿದರು. ನಿಮ್ಮ ಮೊಸಳೆ ಕಣ್ಣೀರಿನಿಂದ ಕೆಲಸ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರ್ಕಾರದ ಒಳಬೇಗುದಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ವಿಶ್ವನಾಥ್ ಹೇಳಿಕೆ ಸಾಕ್ಷಿಯಾಗಿದೆ.

ಜೆಡಿಎಸ್‍ನವರು ಏಳು ಕ್ಷೇತ್ರದಲ್ಲಿ ಮಾತ್ರ ಪ್ರಚಾರಕ್ಕೆ ಸಿಮಿತವಾದವರು. ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹೋದ ಮೈತ್ರಿ ನಾಯಕರಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಯಾವುದೇ ಬಿಜೆಪಿ ನಾಯಕರು ಕರೆ ಕೊಟ್ಟಿಲ್ಲ. ಸಮಿಶ್ರ ಸರ್ಕಾರದ ಒಳ ಬೇಗುದಿಯಿಂದ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ ಎಂದರು.

ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಿಲ್ಲ. ಅಧಿಕಾರಿಗಳಿಗೆ ಕುಡಿಯುವ ನೀರಿನ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲೋಕ್ಕೆ ಮುಂದಾಗಿದ್ದಾರೆ. ಸರ್ಕಾರದ ವಿರುದ್ಧದ ಭಾವನೆ ಜನರ ಮನಸ್ಸಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

ಖರ್ಗೆ ಅವಮಾನಕರ ರೀತಿಯಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಾರೆ ಇದು ಸರಿಯಲ್ಲ. ನಮಗೆ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗುತ್ತಾರೆ. ನೇಣಿನ ಬಗ್ಗೆ ಮಾತನಾಡುವ ಖರ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Share Post

Leave a Reply

Your email address will not be published. Required fields are marked *

error: Content is protected !!