ಮಾವೋವಾದಿಗಳ ನಿಗ್ರಹಕ್ಕಾಗಿ ವಿಶೇಷ ಮಹಿಳಾ ಕಮಾಂಡೋ ಪಡೆ..!

ಬಸ್ತರ್/ದಂತೇವಾಡ, : ಛತ್ತೀಸ್‍ಗಢದ ನಕ್ಸಲ್ ಪೀಡಿತ ಪ್ರದೇಶಗಳಾದ ಬಸ್ತರ್ ಮತ್ತು ದಂತೇವಾಡದಲ್ಲಿ ಮಾವೋವಾದಿಗಳ ನಿಗ್ರಹಕ್ಕಾಗಿ ವಿಶೇಷ ಮಹಿಳಾ ಕಮಾಂಡೋ ಪಡೆಯನ್ನು ನಿಯೋಜಿಸಲಾಗಿದೆ.

ದಂತೇಶ್ವರಿ ಫೈಟರ್ಸ್ ಎಂಬ ಎಲ್ಲಾ 30 ಮಹಿಳಾ ಕಮಾಂಡೋಗಳನ್ನು ಈ ಪಡೆ ಒಳಗೊಂಡಿದೆ. ನಕ್ಸಲ್ ನಿಗ್ರಹಕ್ಕಾಗಿ ರಚಿತವಾದ ದೇಶದ ಪ್ರಪ್ರಥಮ ಮಹಿಳಾ ಘಟಕ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮತ್ತೊಂದು ವಿಶೇಷ ಸಂಗತಿಯೆಂದರೆ, ಈ ತಂಡದಲ್ಲಿ ಐವರು ಮಾಜಿ ನಕ್ಸಲ್ ಮಹಿಳೆಯರು ಇದ್ದಾರೆ. ಈ ಹಿಂದೆ ಪೊಲೀಸರಿಗೆ ಶರಣಾಗಿ ಮುಖ್ಯ ವಾಹಿನಿಗೆ ಸೇರಿದವರಿಗೂ ಈ ಘಟಕದಲ್ಲಿ ಅವಕಾಶ ನೀಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ವರಿ ನಂದಾ ಈ ವಿಶೇಷ ಮಹಿಳಾ ನಕ್ಸಲ್ ನಿಗ್ರಹ ಕಮಾಂಡೋ ಪಡೆಯ ಲೀಡರ್.

ಅರಣ್ಯದಲ್ಲಿ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆ, ಜಂಗಲ್ ವಾರ್‍ಫೇರ್, ಗೆರಿಲ್ಲಾ ಶೈಲಿಯ ದಾಳಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಬಳಕೆ, ಮೋಟರ್‍ಬೈಕ್ ಮತ್ತು ನಾಲ್ಕು ಚಕ್ರಗಳ ವಾಹನಗಳ ಚಾಲನೆ – ಇವುಗಳಲ್ಲಿ 30 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗಿದೆ.

ಇತ್ತೀಚೆಗಷ್ಟೇ ಪೂರ್ಣಪ್ರಮಾಣದ ತರಬೇತಿ ಪೂರ್ಣಗೊಳಿಸಿ ನಕ್ಸಲ್ ನಿಗ್ರಹಕ್ಕೆ ಸಜ್ಜಾಗಿರುವ ಇವರನ್ನು ಈ ವಿಶೇಷ ಘಟಕಕ್ಕೆ ಸೇರಿಸಿಕೊಳ್ಳಲಾಗಿದ್ದು, ಬಸ್ತರ್ ಮತ್ತು ದಂತೇವಾಡದಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಕಳೆದ ವಾರ ದಂತೇವಾಡದಲ್ಲಿ ಮೂವರು ನಕ್ಸಲರು ಹತರಾದ ಕಾರ್ಯಾಚರಣೆಯಲ್ಲಿ ಕೆಲವು ಮಹಿಳಾ ಕಮಾಂಡೋಗಳು ಸಹ ಪಾಲ್ಗೊಂಡಿದ್ದರು. ಛತ್ತೀಸ್‍ಗಢದ ಪ್ರಮುಖ ನಕ್ಸಲ್ ನಿಗ್ರಹ ದಳವಾದ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‍ಜಿ)ನಲ್ಲಿ ಈಗಾಗಲೇ ಕೆಲವು ಮಹಿಳಾ ಕಮಾಂಡೋಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಪೂರ್ಣ ಪ್ರಮಾಣದಲ್ಲಿ 30 ಜನ ಮಹಿಳೆಯರ ಪ್ರತ್ಯೇಕ ವಿಶೇಷ ತಂಡ ರಚನೆಯಾಗಿರುವುದು ದೇಶದಲ್ಲಿ ಇದೇ ಮೊದಲು. ಸಿಆರ್‍ಪಿಎಫ್ ಈಗಾಗಲೇ ಯುವಕ-ಯುವತಿಯರನ್ನು ಒಳಗೊಂಡ ಬಸ್ತಾರಿಯಾ ಬೆಟಾಲಿಯನ್ ಎಂಬ ಪಡೆಯನ್ನು ಸಜ್ಜುಗೊಳಿಸಿದೆ.

ಈ ತಂಡದಲ್ಲಿ ವಿಶೇಷ ತರಬೇತಿ ಪಡೆದ ಯುವತಿಯರನ್ನೂ ದಂತೇಶ್ವರಿ ಫೈಟರ್ ದಳಕ್ಕೆ ಸೇರಿಸಿಕೊಳ್ಳಲಾಗಿದೆ.  ಈ ವಿಶೇಷ ತಂಡ ಛತ್ತೀಸ್‍ಗಢದ ನಕ್ಸಲ್‍ಪೀಡಿತ ಪ್ರದೇಶಗಳ ನಕ್ಷೆ, ಮಾವೋವಾದಿಗಳ ಚಲನವಲನವನ್ನು ಬಲ್ಲವರಾಗಿದ್ದಾರೆ. ನಕ್ಸಲರ ಉಪಟಳವಿರುವ ಬಸ್ತರ್ ಮತ್ತು ದಂತೇವಾಡದಲ್ಲಿ ಬಂಡುಕೋರರನ್ನು ದಮನ ಮಾಡಲು ಈ ವಿಶೇಷ ಪಡೆ ಸದ್ಯದಲ್ಲೇ ಕಾರ್ಯೋನ್ಮುಖವಾಗಲಿದೆ.

Share Post

Leave a Reply

Your email address will not be published. Required fields are marked *

error: Content is protected !!